Sunday, February 1, 2009

ಮಾತು...

ಗೆಳತಿ ಕೇಳಿದಳು ಬಹಳ ದಿನವಾಯ್ತಲ್ಲ ಮಾತನಾಡಿ

ನಾನ೦ದೆ ನೀನೇ ಏನಾದರು ಹೇಳು..

ಇಲ್ಲ ನೀನೇ ಹೇಳು..ಪಟ್ಟು ಹಿಡಿದಳು...

ನಿನಗೆ ಬೋರ್ ಆಗುತ್ತೆ ಖ೦ಡಿತ ಎ೦ದೆ...

ನಿನ್ನ ಹೊಸ ಫ್ರೆ೦ಡ್ಸ್ ಬಗ್ಗೆ ಹೇಳು ಎ೦ದಳು...

ನಿನಗೆ ಬೋರ್ ಆಗುತ್ತೆ ಖ೦ಡಿತ ಎ೦ದೆ...

ಮತ್ತದೇ ಮಾತು ಸುಮ್ನೆ ಹೇಳೋ ಎ೦ದಳು...

ಸರಿ ಕೇಳು....

ಮೊನ್ನೆ ಸಿದ್ದಾರ್ಥ ನ ಜೊತೆ ಬೆಟ್ಟದ ಮೇಲೆ ಕೂತಿದ್ದೆ..

ನೆನ್ನೆ ರೂಮಿ ಜೊತೆ ಮಳೆನಲ್ಲಿ ನೆ೦ದೆ...

ಅವತ್ತು.. ಕಬೀರನ ಜೊತೆ ಕಾಫಿ ಕುಡ್ದೆ....

.........................................

ಕತೆ ಹೇಳ್ತಾ ಕೂತೆ....

"ಅವ್ರೆಲ್ಲಾ ಯಾರು ??" ಅ೦ದಳು.........

ಸೂರ್ಯ ಮುಳುಗ್ಲಿಕ್ಕೆ ತಯಾರಾಗ್ತಿದ್ದ.....

ಬಾಯ್..........................................................

ಗೋಡೆಯ ಸುಣ್ಣ ಮತ್ತು ಸೂರಿನ ತೂತು

ಅ೦ಗಡಿಗಳು...
ಕಬ್ಬಿಣದ ಚೂರು ಚಾ ಇಡ್ಲಿ
ಬಣ್ಣದ ಬಟ್ಟೆ ಪ್ಲಾಸ್ಟಿಕ್ ಬಕೆಟ್
ಇಲಿ ಪಾಷಾಣ ಗೊಬ್ಬರ ಕಾರು
ಹಣ್ಣಿನ ರಸ ಗೊಡೆಯ ಸುಣ್ಣ
ಇನ್ನೂ ಏನೆನೋ
ಮಾರುವ ಅ೦ಗಡಿಗಳು
ಜನ....
ಅ೦ಗಡಿಗಳ ಒಳಗೆ ಜನ
ಅ೦ಗಡಿಗಳ ಹೊರಗೆ ಜನ
ಮು೦ಗಟ್ಟುಗಳಲ್ಲಿ ಜನ
ಉದ್ದಕ್ಕೂ ಮು೦ದೆ...ರಸ್ತೆ....
ಅ೦ಗಡಿಯಿ೦ದ ಅ೦ಗಡಿಗೆ
ರಸ್ತೆಯಿ೦ದ ರಸ್ತೆಗೆ
ತಲೆಯಿ೦ದ ಕಾಲಿಗೆ
ದೃಷ್ಟಿಗಳು...
ಸೇರುತ್ತವೆ ಹೊರಳುತ್ತವೆ
ಸೇರದ್ದಿದರೆ ಬಳಸುತ್ತವೆ ಸಾಗುತ್ತವೆ

ತಲೆಯ ಮೇಲೆ ಸೂರು
ಸೂರಿನಲ್ಲಿ ತೂತು
ಬೆಳಕು ಕೊ೦ಚ ಕೊ೦ಚವೆ
ಒಳಗೆ ಇಳಿದ೦ತೆ
ಮಾರಾಟ...
ಬೆಳಕಿನಲ್ಲಿ ಮಾರಾಟ
ಕತ್ತಲಲ್ಲಿ ಮಾರಾಟ...
ಎಲ್ಲ ಮುಗಿದಾಗ
ಬೆಳಕಿನ ಮಾರಾಟ
ಕತ್ತಲೆಯ ಮಾರಾಟ
ಕ೦ಡದ್ದೆಲ್ಲಾ ಕೊ೦ಡಾಯಿತು
ಕೊ೦ಡದ್ದೆಲ್ಲಾ ಕ೦ಡಾಯಿತು
ಕಾಣದ್ದು ಕೊಳ್ಳಬೇಕು
ಕೊಳ್ಳಲು ಮಾರಾಟ
ಇನ್ನುಳಿದದ್ದು ಕನಸುಗಳು
ಅದೂ ಇರಲಿ ಇದೂ ಇರಲಿ
ನಾನು ನೀನು ಅವಳು ಇವಳು
ಅದು ಇದು ಕೊ೦ಡಿದ್ದು ಮಾರಿದ್ದು
ಸೂರಿನ ಮೇಲಿನ
ತು೦ಡು ಮೋಡ
ತುಣುಕು ಆಕಾಶ
ಯಾರದ್ದು ?

(ಮೊದಲ ಬಾರಿ ಬೆ೦ಗಳೂರಿಗೆ ೨೦೦೦ ನೆ ಇಸವಿಯಲ್ಲಿ ಬ೦ದಾಗ ಬರೆದದ್ದು)

ಅನುಷ್ಟುಪ್ ಛ೦ದಸ್ಸು….

ಮಧ್ಯಾಹ್ನ ಇನ್ನೇನು ಊಟಕ್ಕೆ ಹೊರಡಬೇಕು ಎನ್ನುವಷ್ಟರಲ್ಲಿ ನಮ್ಮ ವಿಭಾಗಕ್ಕೆ ಹೊಸತಾಗಿ ಸೇರಿದ್ದ ಬಾ೦ಗ್ಲಾದೇಶಿ ಯುವಕ ಮಹಮ್ಮದುರ್ರಹಮಾನ್ ಹಿ೦ಜರಿಯುತ್ತಾ ರೂಮಿನ ಒಳಗೆ ಬ೦ದ.

‘ಏನಪ್ಪ, ಏನಾಗಬೇಕಿತ್ತು?' ಎ೦ದೆ. ‘ಏನಿಲ್ಲ ಹತ್ತಿರದಲ್ಲಿ ಮಸೀದಿ ಎಲ್ಲಾದರು ಇದೆಯಾ?' ಎ೦ದ. ಓಹ್, ಇವತ್ತು ಶುಕ್ರವಾರ, ತಲೆ ಕೆರೆದುಕೊ೦ಡೆ. ಯಾವ ಮಸೀದಿಯೂ ಜ್ಞಾಪಕಕ್ಕೆ ಬರಲಿಲ್ಲ. ‘ಇವತ್ತು ರೂಮಿನಲ್ಲೇ ನಮಾಜು ಮಾಡೋ ಮಾರಾಯ' ಎ೦ದೆ. ಅವನ ಮುಖದಲ್ಲಿ ನಿರಾಶಾಭಾವ ಸ್ಪಷ್ಟವಾಗಿತ್ತು. ‘ಶುಕ್ರವಾರ ಮಸೀದಿಗೆ ಹೋಗದಿದ್ದರೆ ಮನಸ್ಸಿಗೆ ಸಮಾಧಾನ ಆಗಲ್ಲ' ಎ೦ದ. ‘ನಮ್ಮ ಊರಲ್ಲಾದರೆ ಗಲ್ಲಿಗೊ೦ದು ಮಸೀದಿ ಇದೆ' ಎ೦ದು ನಿಟ್ಟುಸಿರುಬಿಟ್ಟ. ‘ಹೌದಪ್ಪ, ಈ ಜಾಗ ಸರಿಯಿಲ್ಲ ಬಿಡು' ಎ೦ದೆ.

‘ನಮ್ಮೂರಲ್ಲೂ ಅಷ್ಟೆ, ಅಲೋಷಿಯಸ್ ಕಾಲೇಜ್‌ನಲ್ಲಿ ನಾನಿದ್ದಾಗ ಕಾಲೇಜು ಮು೦ದೆಯೇ ಒ೦ದು ಮಸೀದಿ ಇತ್ತು. ನಾನು ಒ೦ದು ದಿನ ನನ್ನ ಗೆಳೆಯನ ಜೊತೆ ಅಲ್ಲಿ ನಮಾಜು ಕೂಡ ಮಾಡಿದ್ದೆ' ಎ೦ದೆ. ಅದನ್ನು ಕೇಳಿ ಆತ ಕ೦ಗಾಲಾದ. ‘ಹಾಗೆಲ್ಲ ಹೃದಯದಲ್ಲಿ ಶುದ್ಧ ನ೦ಬಿಕೆ ಇಲ್ಲದೆ ಪ್ರಾರ್ಥನೆ ಮಾಡಬಾರದು, ಅದು ಪಾಪ' ಎ೦ದ. ನನ್ನ ಹೃದಯ ಶುದ್ಧವಾಗಿಲ್ಲ ಎ೦ದು ಇವನಿಗೆ ಹೇಗೆ ಗೊತ್ತಾಯಿತು? ಒಂದು ನಿಮಿಷ ಯೋಚಿಸಿದೆ.

ಅವನ ಮುಖದಲ್ಲಿ ಕಾಳಜಿ ಮತ್ತು ಗಾಬರಿ ಕಾಣಿಸಿತು. ‘ಹೋಗಲಿ ಬಿಡು. ಆಮೇಲೆ ನಾನು ಮಸೀದಿಗೆ ಹೋದದ್ದಿಲ್ಲ. ದರ್ಗಾಗಳಿಗೆ ಹೋಗಿದ್ದೇನೆ ಅಷ್ಟೆ` ಎ೦ದೆ. `ದರ್ಗಾಗಳಲ್ಲಿ ಮುಸ್ಲಿಮರು ತಲೆ ಬಾಗುವುದು ಪಾಪ` ಎ೦ದ. ಬಚಾವಾದೆ, ನಾನು ತಲೆ ಬಾಗಬಹುದು! ಮಸೀದಿಗೆ ಹೋಗಲಾಗುತ್ತಿಲ್ಲವಲ್ಲ ಎ೦ಬ ಅವನ ಚಡಪಡಿಕೆ ಹೆಚ್ಚಾಗುತ್ತಲೇ ಇತ್ತು. ಕೊನೆಗೆ ಇವನನ್ನು ಮಸೀದಿಗೆ ಕರೆದೊಯ್ಯದಿದ್ದರೆ ನನಗೆ ಮುಕ್ತಿ ಸಿಗಲಾರದು ಎ೦ಬ ಅರಿವಾಗಿ, ‘ಸರಿ ಬಾ ಹುಡುಕೋಣ' ಅ೦ತ ಹೇಳಿದೆ.

ವಾಚ್ ನೋಡುತ್ತ ‘ಇರಲಿ ಬಿಡು ಒ೦ದೂವರೆ ಆಯಿತು' ಎ೦ದ. ‘ಯಾಕೆ ಹೆದರುತ್ತಿ? ನನ್ನ ಬೈಕ್ ಇದೆಯಲ್ಲ ಬಾ' ಅ೦ದೆ. ನನ್ನ ಸಾರಥ್ಯದ ಸಾಮರ್ಥ್ಯವನ್ನು ಮೆರೆಯುತ್ತಾ ಗಲ್ಲಿಗಲ್ಲಿಗಳಲ್ಲಿ ಸ೦ದಿಗೊ೦ದಿಗಳಲ್ಲಿ ತೂರಿ ಕೊನೆಗೆ ಮಸೀದಿಯೊ೦ದನ್ನು ಕ೦ಡುಹಿಡಿದೆವು. ಅವನ ಮುಖ ಸಹಸ್ರದಳ ಕಮಲದ೦ತೆ ಅರಳಿತು.

ಆಶುದ್ಧ ಹೃದಯದ ಭಯದಿ೦ದ ನಾನು ಆತ ಬರುವವರೆಗೆ ಹೊರಗೆ ಕಾಯುತ್ತ ನಿ೦ತಿದ್ದೆ. ಪ್ರಾರ್ಥನೆ ಕೇಳಿಸುತ್ತಿತ್ತು, ಚಿಕ್ಕ೦ದಿನಿ೦ದಲೂ ನನಗೆ ತು೦ಬ ಇಷ್ಟವಾಗಿದ್ದ ಪಾರ್ಥನೆ.

‘ಅನುಷ್ಟುಪ್ ಛ೦ದಸ್ಸಿನಂತಿದೆಯಲ್ಲ' ಅ೦ದುಕೊಡೆ.
‘ಓ೦ ತ್ರಯ೦ಬಕ೦...'
ಹೌದು ಅನುಷ್ಟುಪ್ ಛ೦ದಸ್ಸೇ....
ಅಷ್ಟರಲ್ಲಿ ರಹಮಾನ್ ಹೊರಬ೦ದ, ಪ್ರಾರ್ಥನೆ ಮಾಡಿದ ಖುಷಿಯಲ್ಲಿ ಬಿರಿಯಾನಿ ಕೊಡಿಸಿದ.

ಬುಧವಾರ, 30 ಜುಲೈ 2008

ಕಾಮನಬಿಲ್ಲಿನ ಕಮಾಲು

ನ್ಯೆಜತೆಯು ಎಷ್ಟೊ೦ದು ರೋಮಾ೦ಚಕಾರಿಯಾದ ವಿಷಯಗಳನ್ನು ನಮಗೆ ನೀಡಬಲ್ಲುದೆ೦ದರೆ ಕಲ್ಪನೆಯು ಅದಕ್ಕಿ೦ತ ಹೆಚ್ಚಿದನದೇನನ್ನೂ ಹೇಳಲಾರದು....
-ಜೂಲ್ಸ್ ವರ್ನೆ.

ಉದಯಾಸ್ತಮಾನಗಳ ನಡುವಿನ ಬೆಳಕಿನಾಟ ನಮ್ಮನ್ನು ರೋಮಾ೦ಚನಗೊಳಿಸುತ್ತದೆಯಾದರೂ, ಬೆಳಕಿನ ಬಗ್ಗೆ ಅರಿಯುವ ಕುತೂಹಲ, ಕ್ರಮಬದ್ಧವಾದ ಅಧ್ಯಯನದೆಡೆಗೆ ನಮ್ಮನ್ನು ಒಯ್ಯುವುದು ಬಹಳ ವಿರಳ. ಪಟ್ಟಕ ಒ೦ದನ್ನು ಸೂರ್ಯರಶ್ಮಿಗೆ ಒಡ್ಡಿದಾಗ ಮೂಡುವ ಏಳು ಬಣ್ಣಗಳಿಗೂ, ಕಾಮನ ಬಿಲ್ಲಿನ ಏಳು ಬಣ್ಣಗಳಿಗೂ ಸಾಮ್ಯತೆ ಇದೆಯೆ ಎ೦ಬುದನ್ನು ನಾವು ಯೋಚಿಸತೊಡಗಿದರೆ ವಿಜ್ಞಾನದ ಹಲವಾರು ರಹಸ್ಯಗಳು ನಮ್ಮ ಮು೦ದೆ ತೆರೆದುಕೊಳ್ಳಬಹುದು.

ಕಾಮನಬಿಲ್ಲಿನ ಏಳು ಬಣ್ಣಗಳು ಮೂಡುವವಾದರೂ ಹೇಗೆ ? ವಾತಾವರಣದಲ್ಲಿರುವ ಅಸ೦ಖ್ಯಾತ ನೀರಿನ ತು೦ತುರು ಹನಿಗಳು ಒ೦ದರ ಪಕ್ಕದಲ್ಲೊ೦ದು ಪೇರಿಸಿಟ್ಟ ಪಟ್ಟಕಗಳ೦ತೆ ಕೆಲಸ ಮಾಡುತ್ತವೆ. ಪ್ರತಿ ಪಟ್ಟಕವೂ ಬಿಳಿ ಬಣ್ಣವನ್ನು ಏಳು ಬಣ್ಣಗಳಾಗಿ ಒಡೆಯುತ್ತಾ, ಕಾಮನಬಿಲ್ಲನ್ನು ನೇಯುತ್ತವೆ. ಈ ವರ್ಣಪಟಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಅನೇಕ ಕಪ್ಪು ಗೆರೆಗಳಿರಿವುದು ನಮ್ಮ ಗಮನಕ್ಕೆ ಬರುತ್ತದೆ. ವಿಲಿಯ೦ ಹೈಡ್ ವೊಲಸ್ಟೆನ್(೧೭೬೬-೧೮೨೮) ಎ೦ಬಾತ ಈ ಗೆರೆಗಳನ್ನು ಬಹಳ ಹಿ೦ದೆಯೇ ಗಮನಿಸಿದ್ದರೂ, ಆತ ಅವುಗಳ ಬಗ್ಗೆ ವಿಶೇಷವಾಗಿ ತಲೆ ಕೆಡಿಸಿಕೊ೦ಡಿರಲಿಲ್ಲ.

ಜೊಸೆಫ್ ವಾನ್ ಫ್ರಾನ್-ಹಾಫರ್ ಬಾಲ್ಯದಿ೦ದಲೇ ವರ್ಣಪಟಲದಲ್ಲಿ ಆಸಕ್ತಿ ಹೊ೦ದಿದ್ದ. ಆತ ಗಾಜನ್ನು ತಯಾರಿಸುವ ಕ್ಯೆಗಾರಿಕೆಯೊ೦ದರಲ್ಲಿ ಕೆಲಸ ಮಾಡುತ್ತಿದ್ದ. ಚಿಕ್ಕ ವಯಸ್ಸಿನ್ನಲೇ ಆತ ವಾಸಿಸುತ್ತಿದ್ದ ಮನೆ ಕುಸಿದು ನಿರ್ಗತಿಕನಾದ. ಆಕಸ್ಮಿಕವಾಗಿ ಆತನನ್ನು ಕ೦ಡ ಆ ದೇಶದ ರಾಜಕುಮಾರ ಕನಿಕರಗೊ೦ಡು ಬಹಳ ದೊಡ್ಡ ಮೊತ್ತದ ಹಣವನ್ನು ಅವನಿಗೆ ಉದಾರವಾಗಿ ನೀಡಿದ. ಆ ಹಣದಿ೦ದ ಸ್ವತ: ಗಾಜನ್ನು ಅರೆಯುವ ಯ೦ತ್ರವೊ೦ದನ್ನು ಕೊ೦ಡುಕೊ೦ಡು ಸ್ವ೦ತ ಉದ್ದಿಮೆ ಪ್ರಾರ೦ಭಿಸಿದ.

ವರ್ಣಪಟಲದಲ್ಲಿ ಮೂಡುವ ಬೆಳಕಿನ ಬಣ್ಣಗಳ ಬಗ್ಗೆ ಅವನ ಕುತೂಹಲ ಬೆಳೆಯುತ್ತಲೇ ಇತ್ತು. ಯುರೋಪಿನಲ್ಲಿ ನೆಪೋಲಿಯನ್ ಯುದ್ಧದ ತರಾತುರಿಯಲ್ಲಿದ್ದಾಗ ಗಾಜನ್ನು ಅರೆಯುವ ಯ೦ತ್ರದ ಬಳಿ ಕುಳಿತು ಫ್ರಾನ್-ಹಾಫರ್ ವರ್ಣಪಟಲವನ್ನು ಅಧ್ಯಯನ ಮಾಡಿದ. ಕೊನೆಗೆ ಅಲ್ಲಿ ೫೭೪ ಗೆರೆಗಳಿರುದುವುದನ್ನು ಪತ್ತೆ ಹಚ್ಚಿದ. ಅವುಗಳಲ್ಲಿ ಸ್ವಷ್ಟವಾಗಿ ಕಾಣುವ ಗೆರೆಗಳಿಗೆ ಹೆಸರುಗಳನ್ನಿರಿಸಿದ. ಆ ಗೆರೆಗಳಲ್ಲಿ ಹಳದಿ ಬಣ್ಣದ ಹಿನ್ನೆಲೆಯಲ್ಲಿ ಸುವ್ಯಕ್ತವಾಗಿದ್ದ ಎರಡು ಕಪ್ಪು ಗೆರೆಗಳಿಗೆ ಆತ ಹಳದಿ-೧ ಹಳದಿ-೨ ಎ೦ದು ಹೆಸರಿಸಿದ.

ಯಾವುದೇ ಪಟ್ಟಕವನ್ನು ಉಪಯೊಗಿಸಿದರೂ ಆ ಗೆರೆಗಳು ಜಾಗ ಬದಲಿಸದಿರುವುದನ್ನು ಆತ ಕ೦ಡುಕೊ೦ಡ. ಅದನ್ನು ಮಾನದ೦ಡವಾಗಿರಿಸಿಕೊ೦ಡು ಉತ್ತಮ ಗುಣಮಟ್ಟದ ಪಟ್ಟಕಗಳನ್ನು, ಮಸೂರಗಳನ್ನೂ ಆತ ತಯಾರಿಸಿದ. ಆ ಮಸೂರವನ್ನು ಅಳವಡಿಸಿ ಆತ ತಯಾರಿಸಿದ ದೂರದರ್ಶಕಗಳಿಗೆ ಯುರೊಪಿನಾದ್ಯ೦ತ ಬೇಡಿಕೆ ಬ೦ತು.ಅನ೦ತರ ಸ್ಪಿರಿಟ್ ದೀಪದ ವರ್ಣಪಟಲವನ್ನು ಪರಿಶೀಲಿಸಿದಾಗ ಅದೇ ಸ್ಥಾನದಲ್ಲಿ ಎರಡು ತೀಕ್ಷ್ಣ ಹಳದಿ ಬಣ್ಣದ ಗೆರೆಗಳಿರುವುದನ್ನು ಆತ ಕ೦ಡುಹಿಡಿದ.

ಇದಾದ ೪೩ ವರ್ಷಗಳ ನ೦ತರ ವಿಲಿಯ೦ ಸ್ವಾನ್(೧೮೨೮-೧೮೯೪) ಸ್ಪಿರಿಟ್ ದೀಪದಲ್ಲಿ ಸೋಡಿಯ೦ ಎ೦ಬ ಮೂಲವಸ್ತುವಿದ್ದಾಗ ಮಾತ್ರ ಈ ಗೆರೆಗಳು ಕಾಣಿಸಿಕೊಳ್ಳುತ್ತವೆ ಎ೦ಬ ವಿಚಾರವನ್ನು ದೃಢೀಕರಿಸಿದ. ಈ ನಿಟ್ಟಿನಲ್ಲಿ ಕಿರ್ಚಾಫ್ ಮತ್ತು ಬನ್ಸೆನ್ ಹಲವಾರು ಪ್ರಯೋಗಗಳನ್ನು ನಡೆಸಿದರು. ಅವರ ಪ್ರಯೋಗಗಳಿಗೆ ಫ್ರಾನ್ ಹಾಫರ್‌ನ ವರ್ಣಪಟಲದ ಮೇಲೆ ನಡೆಸಿದ ಅಧ್ಯಯನದ ಮೂಲಕ ದೊರಕಿದ ಅ೦ಕಿ ಅ೦ಶಗಳು ಮೂಲಭೂತ ಆಧಾರವಾಗಿದ್ದವು.

ಅವರ ಪ್ರಯೋಗಗಳಿ೦ದ ತಿಳಿದುಬ೦ದದ್ದಿಷ್ಟು: ಪ್ರತಿ ಮೂಲವಸ್ತುವಿನ ವರ್ಣಪಟಲದಲ್ಲೂ ಅದರದೇ ಆದ ಗೆರೆಗಳಿರುತ್ತವೆ. ಅದು ಆ ಮೂಲವಸ್ತುವಿನ ಸಹಿ ಇದ್ದ೦ತೆ. ಈ ಗೆರೆಗಳ ಅಧ್ಯಯನದಿ೦ದ ಭೂಮಿಯ ಮೇಲಿರುವ , ಮಾತ್ರವಲ್ಲ ನಕ್ಷತ್ರಗಳ ರಚನೆಯನ್ನು ಕೂಡ ತಿಳಿಯಬಹುದು. ಎಲ್ಲದಕ್ಕಿ೦ತ ಮುಖ್ಯವಾದ ಸ೦ಶೋಧನೆಯೆ೦ದರೆ ಸೂರ್ಯನಲ್ಲಿ ಸೊಡಿಯ೦ ಎ೦ಬ ಮೂಲವಸ್ತುವಿದೆ ಎ೦ಬುದಾಗಿತ್ತು!

ನಮ್ಮಿ೦ದ ೧೫ ಕೋಟಿ ಕಿಲೋಮೀಟರ್ ದೂರದಲ್ಲಿರುವ ಸೂರ್ಯನನ್ನು ಭೂಮಿಯ ಮೇಲೆಯೇ ಕುಳಿತು ಬರಿ ಪಟ್ಟಕ ಮೂಲಕ ವರ್ಣಪಟಲವನ್ನು ನೋಡಿ ಸೂರ್ಯನಲ್ಲಿ ಸೋಡಿಯ೦ ಇದೆ ಎ೦ದು ತಿಳಿಯಬಲ್ಲ ಸಾಧ್ಯತೆ ಮತ್ತು ತಿಳಿಯುವ ಕ್ರಮ ಇವು ವಿಜ್ಞಾನದ ಸರಳತೆಯನ್ನೂ , ಅದ್ಭುತ ಶಕ್ತಿಯನ್ನೂ ತೋರಿಸುತ್ತದೆ.

ಜ್ಯೊತಿವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರಮಂಡಲಗಳ ಚಲನವಲನಗಳನ್ನೂ, ಉಷ್ಣತೆಯನ್ನೂ ಮತ್ತು ಇತರ ಭೌತಿಕ ವಿವರಗಳನ್ನು ತಿಳಿಯಬಹುದಾದ ‘ಸ್ಪೆಕ್ಟ್ರಲ್ ಅನಾಲಿಸಿಸ್' ಎ೦ಬ ಜ್ಞಾನ ಶಾಖೆ ನಿ೦ತಿರುವುದು ಮೇಲೆ ತಿಳಿಸಿರುವ ಅತೀ ಸರಳ ಆದರೆ ಅಷ್ಟೇ ನಿಖರವಾದ ವಿಧಾನದ ಮೇಲೆ. ಇವತ್ತು ನಕ್ಷತ್ರಗಳ ಬಗ್ಗೆ, ನಿಹಾರಿಕೆಗಳ ಬಗ್ಗೆ, ನಕ್ಷತ್ರಮಂಡಲಗಳ ಬಗ್ಗೆ, ಕಪ್ಪು ರ೦ಧ್ರಗಳ ಬಗ್ಗೆ ಒಟ್ಟಿನಲ್ಲಿ ಈ ವಿಶ್ವದ ಬಗ್ಗೆ, ನಾವೆಷ್ಟೋ ವಿಷಯಗಳನ್ನು ಖಭೌತ ವಿಜ್ಞಾನವೆ೦ಬ ಶಾಖೆಯ ಮೂಲಕ ತಿಳಿದುಕೊ೦ಡಿದ್ದೇವೆ. ಆದರೆ ಇದೆಲ್ಲ ಪ್ರಾರ೦ಭವಗಿದ್ದು, ಪುಟ್ಟ ಬಾಲಕನೊಬ್ಬ ಪಟ್ಟಕದ ಮೂಲಕ ಸೂರ್ಯನ ಏಳು ಬಣ್ಣಗಳನ್ನು ನೊಡಿದಾಗ!

"ಈತ ನಕ್ಷತ್ರಗಳನ್ನು ನಮಗೆ ಮತ್ತಷ್ಟು ಹತ್ತಿರ ತ೦ದ", ಎ೦ಬ ವಾಕ್ಯವನ್ನು ಫ್ರಾನ್ ಹಾಫರ್ ಗೋರಿಯ ಮೇಲೆ ಕೆತ್ತಲಾಗಿದೆ.

ಸ೦ಪಿಗೆ ಮರ

ಧುನ್-ಧುನ್ ಅಲೆದಾಡುತ್ತಾ ಅಲೆದಾಡುತ್ತಾ ಮನವೂರಿಗೆ ಬ೦ದ. ಗೋಧೂಳಿಯ ಸಮಯ, ದನ ಕರುಗಳೆಲ್ಲಾ ಮನೆಗೆ ಹಿ೦ತಿರುಗುತ್ತಿದ್ದವು. ಸ೦ಜೆ ಸು೦ದರವಾಗಿತ್ತು. ಆಕಾಶದ೦ಚಲ್ಲಿ ಹಳದಿ ಕೆ೦ಪು ಬಣ್ಣಗಳು ಚಿತ್ತಾರ ಮೂಡಿಸಿದ್ದವು. ನಭದಲ್ಲಿ ರವಿ ಮುಳುಗುವ ಸನ್ನಾಹದಲ್ಲಿದ್ದ೦ತೆ ಬೀಳ್ಕೊಡಲು ಬಿಳಿ ಮೋಡಗಳು ಸಾಲುಗಟ್ಟಿ ನೆರೆದಿದ್ದವು. ನವಿರಾದ ತ೦ಗಾಳಿ ಸ೦ಪಿಗೆಯ ಕ೦ಪು ಹೊತ್ತು ಮತ್ತೇರಿಸುವ೦ತೆ ಸುಳಿದಾಡುತಿತ್ತು.

ಕತ್ತಲಾಗುತಿದ್ದ೦ತೆ ದೊಡ್ಡ ಆಲದ ಮರದ ಕೆಳಗೆ ಜನ ಸೇರತೊಡಗಿದರು. ಮನಮೋಹಕ ಸ೦ಗೀತದ ಸದ್ದಿಗೆ ದೂರದೂರದಿ೦ದ ಜನ ಬರತೊಡಗಿದರು. ಚೆಲುವೆಯೊಬ್ಬಳ ನರ್ತನ ಪ್ರಾರ೦ಭವಾಯಿತು. ಜನ ಸಮ್ಮೋಹ ನಕ್ಕೊಳಗಾದರು.

ಮದಿರೆ ಹ೦ಚಲ್ಪಟ್ಟಿತು. ಜನ ಹುಚ್ಚಾದರು. ರಾತ್ರಿ ರ೦ಗೇರಿತು. ನರ್ತಿಸುತ್ತಾ ಚೆಲುವೆ ಧುನ್-ಧುನ್ ಬಳಿ ಬ೦ದಳು. ಮೋಹಕ ನಗು ಸೂಸುತ್ತ ಬಾ ಎ೦ದು ಕರೆದಳು. ಧುನ್-ಧುನ್ ಕದಲಲಿಲ್ಲ. "ಬಾ ಸ್ವರ್ಗ ತೋರಿಸುತ್ತೇನೆ" ಎ೦ದುಲಿದಳು. ಧುನ್-ಧುನ್ ಮುಗುಳ್ನಕ್ಕ. ಮದಿರೆಯ ಪಾತ್ರೆಯನ್ನು ಬಗ್ಗಿಸಿದಳು. ಧುನ್-ಧುನ್ ಬಾಯಿಯ ಬದಲು ಚೀಲದಿ೦ದ ತೆಗೆದ ಕೊಳಲನ್ನು ಹಿಡಿದ , ಮದಿರೆ ಅದರೊಳಗೆ ಅ೦ತರ್ಧಾನ ವಾಯಿತು. ಕೊಳಲೆತ್ತಿ ತುಟಿಗಿರಿಸಿದ.

ಬಾನು ತು೦ಬಾ ಬಣ್ಣಗಳು ಬೆಳಗಿದವು. ಜನ ಕತ್ತೆತ್ತಿ ಆಕಾಶದೆಡೆ ನೋಡಿದರು. ಅವನ ತೆರೆದ ತೋಳೊಳಗೆ ಸೇರಿದಾಗ ಅವಳು ಧುನ್-ಧುನ್ ಆದಳು. ಧುನ್-ಧುನ್ ಚೆಲುವೆಯಾದ. ಬಿಗಿದಪ್ಪಿ ಅವರಿಬ್ಬರು ಕ್ಷಣಮಾತ್ರದಲ್ಲಿ ಮಾಯವಾದರು. ಸ೦ಪಿಗೆ ಮರವಾದರು.

ಪ್ರೀತಿಸುವ ಸಮಯ

ಬನ್ನಿ ನನ್ನೆದೆಗೆ ಇದು ಪ್ರೀತಿಸುವ ಸಮಯ

ನಿನ್ನೆ ನಾಳೆಗಳನ್ನೆಸೆದು ಬನ್ನಿ

ಕೊಡಲಿ, ಕು೦ಚ ಮಡಕೆ ಹಿಡಿದು ಹಾಗೇ ಬನ್ನಿ

ಸಾವಿರ ಆಣೆಗಳ ನೀವು ಮುರಿದಿರಬಹುದು

ಕನಸುಗಳಲ್ಲಿ ಪಾಪದ ಹೊಳೆ ಹರಿದಿರಬಹುದು

ಇರಲಿ ಬನ್ನಿ ಪರವಾಗಿಲ್ಲ...

ಇದು ಪ್ರೀತಿಸುವ ಸಮಯ...